ರ್ಯಾಮ್ಸೆಸ್ 2

ಈಜಿಪ್ಟಿನ ಪ್ರಸಿದ್ಧ ದೊರೆ (ಕ್ರಿ.ಪೂ 1290-24). ಇವನು ಚಿಕ್ಕಂದಿನಲ್ಲಿಯೇ ಪಟ್ಟಕ್ಕೆ ಬಂದು, ತನ್ನ ತಂದೆ ಒಂದನೆಯ ಸೆತಿಯೊಡನೆ ಸಹ ಆಡಳಿತ ನಡೆಸಿದ (ಕೊರೆಜೆಂಟ್). ತನ್ನ ಆಡಳಿತದ ಮೊದಲ ಅವಧಿಯಲ್ಲಿ ಸಿರಿಯದ ಮೇಲೆ ಹಿಟ್ಟೈಟರ ಹಿಡಿತವನ್ನು ಕೊನೆಗೊಳಿಸಲು ಯತ್ನಿಸಿದ. ಕ್ರಿಪೂ.ಸು. 1285ರಲ್ಲಿ ಹಿಟ್ಟೈಟರೊಡನೆ ಕದೇಶ್ ಎಂಬಲ್ಲಿ ನಿರಂತರ ಕಾಳಗ ಮಾಡಿ ವಿಜಯಿಯಾದ. ಆದರೆ ಕ್ರಿ.ಪೂ. 1269ರಲ್ಲಿ ಹಿಟ್ಟೈಟರ ದೊರೆಯೊಡನೆ ಒಪ್ಪಂದ ಮಾಡಿಕೊಂಡು ಸಿರಿಯವನ್ನು ಇಬ್ಬರೂ ಹಂಚಿಕೊಂಡರು. ಈತ ತನ್ನ ಸುದೀರ್ಘ ಆಳಿಕೆಯ ಬಹುಪಾಲು ಸಮಯವನ್ನು ಬೃಹತ್‍ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿದ. ಇವನ ಆಳಿಕೆಯಲ್ಲಿ ಅನೇಕ ಭವ್ಯ ಕಟ್ಟಡಗಳೂ ದೇವಾಲ ಯಗಳು ನಿರ್ಮಾಣಗೊಂಡವು. ಈತ ನೈಲ್‍ನದಿಯ ಮುಖಜ ಭೂಮಿಯಲ್ಲಿ ಹೊಸ ರಾಜಧಾನಿಯನ್ನು ಕಟ್ಟಿದ. ಕಾರ್ನಾಕ್‍ನಲ್ಲಿ ಅಮನ್‍ರೇ ಎಂಬ ದೇವಾಲಯದ ಬೃಹತ್ ಸಭಾಂಗಣವನ್ನು ಪೂರ್ಣಗೊಳಿಸಿದ. ಅಬು ಸಿಂಬಲ್ ಎಂಬಲ್ಲಿ ಬೃಹತ್ ಶಿಲಾದೇವಾಲಯ ಗಳನ್ನು ನಿರ್ಮಿಸಿದ. ಈತನ ಮಮ್ಮಿಯನ್ನು ಈಜಿಪ್ಟಿನ ಕೈರೋ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲಾಗಿದೆ. ಬೈಬಲ್‍ನಲ್ಲಿ ಉಲ್ಲೇಖಿತವಾಗಿರುವ ಫೆರೋ ಬಹುಶಃ ಈತನೇ ಇರಬೇಕೆಂದು ಅಭಿಪ್ರಾಯಪಡಲಾಗಿದೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ